Good News For Students

SSLC ಟಾಪರ್​ಗಳಿಗೆ ಇನ್ಮುಂದೆ ಲ್ಯಾಪ್‌ಟಾಪ್ ಬದಲು ನಗದು ಬಹುಮಾನ
ಎಸ್​​ಎಸ್​​ಎಲ್​​ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿ ಜಿಲ್ಲಾ ಮಟ್ಟದಲ್ಲಿ ಟಾಪರ್​ಗಳಾಗಿ ಹೊರಹೊಮ್ಮಿದ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ನೀಡುವ ಯೋಜನೆಯಲ್ಲಿ ಸರ್ಕಾರ ತುಸು ಮಾರ್ಪಾಡು ಮಾಡಿದೆ. ಇನ್ನು ಮುಂದೆ ಲ್ಯಾಪ್​ಟಾಪ್ ಬದಲಿಗೆ ನಗದು ಬಹುಮಾನವನ್ನು ನೀಡುವುದಾಗಿ ಘೋಷಿಸಿದೆ. ಇದರಂತೆ, ವಿದ್ಯಾರ್ಥಿಗಳು ತಲಾ 50,000 ರೂ. ಪಡೆಯಲಿದ್ದಾರೆ.

SSLC

ಬೆಂಗಳೂರು, ಜನವರಿ 24: ರಾಜ್ಯ ಸರ್ಕಾರ ಇನ್ನು ಮುಂದೆ ಎಸ್‌ಎಸ್‌ಎಲ್‌ಸಿ (SSLC) ಟಾಪರ್‌ಗಳಿಗೆ ಲ್ಯಾಪ್‌ಟಾಪ್‌ ಬದಲಿಗೆ ನಗದು ಬಹುಮಾನ (Cash Prize) ನೀಡಲಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಈಗಾಗಲೇ ಆದೇಶ ಹೊರಡಿಸಿದ್ದು, ಅದರ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಅಗ್ರ ಸ್ಥಾನ ಪಡೆದ ಟಾಪ್-3 ವಿದ್ಯಾರ್ಥಿಗಳ ಆಧಾರ್ ಲಿಂಕ್ಡ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ನಗದು ಬಹುಮಾನವು ಪ್ರತಿ ವಿದ್ಯಾರ್ಥಿಗೆ 50,000 ರೂ. ಆಗಿರಲಿದೆ.

2024-25ನೇ ಶೈಕ್ಷಣಿಕ ವರ್ಷದಲ್ಲಿ 758 ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ (SSP) ಮೂಲಕ ನಗದು ಬಹುಮಾನಕ್ಕೆ ಅರ್ಹರಾಗಿದ್ದಾರೆ.

ವಿದ್ಯಾರ್ಥಿಗಳ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ‘ಗುಣಮಟ್ಟದ ಭರವಸೆ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಉಪಕ್ರಮ’ ಯೋಜನೆ ಅಡಿಯಲ್ಲಿ ಈ ಯೋಜನೆಗೆ ಸುಮಾರು 325 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ಮಕ್ಕಳ ದಿನಾಚರಣೆ ಸಂದರ್ಭದಲ್ಲಿಈ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಆ ನಂತರ, ಸರ್ಕಾರ ಇದೀಗ ಆದೇಶ ಹೊರಡಿಸಿದೆ. ತಮಗೆ ದೊರೆತ ಬಹುಮಾನವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಸ್ವಾತಂತ್ರ್ಯ ವಿದ್ಯಾರ್ಥಿಗಳಿಗೆ ನೀಡಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲ್ಯಾಪ್‌ಟಾಪ್‌ ನೀಡುವ ಬದಲು ನಗದು ಬಹುಮಾನ ನೀಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ ಮತ್ತು ಪ್ರಯೋಜನ ದೊರಕಲಿದೆ ಎಂದು ಶಾಲಾ ಹಾಗೂ ಶಿಕ್ಷಣ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Leave a Reply